ಭಾರತದ ಕತೆ ಸೃಷ್ಟಿಯಾದ ನಂತರ ವ್ಯಾಸರನ್ನು ಆಶ್ರಯಿಸಿ , ತಮ್ಮ ಸೃಜನಶೀಲತೆಯನ್ನು ಬಳಸಿ ಎಷ್ಟು ಜನ ಏನೇನೆಲ್ಲಾ ಬರೆದಿದ್ದಾರೋ ಲೆಕ್ಕ ಇಡಲು ಸಾಧ್ಯವಿಲ್ಲ. ಇದೇ ಪರಂಪರೆಯಲ್ಲಿ ಮುಂದೇವರೆದು ,ಮಲಯಾಳಂ ಸಾಹಿತ್ಯದಲ್ಲಿ ಪ್ರಸಿದ್ಧ ಹೆಸರು MT ವಾಸುದೇವನ್ ನಾಯರ್ ,ಅವರ magnum opus ಎಂದು ಕರೆಯಬಹುದಾದ ಕೃತಿ Randamoozham (Bhima the lone warrior- English) ನಲ್ಲಿ ವ್ಯಾಸರ ಭಾರತವನ್ನು ಆಧರಿಸಿ ಭೀಮನ ದೃಷ್ಟಿಯಿಂದ ಮತ್ತೊಮ್ಮೆ ಕತೆಯ ಒಳಗೆ ಪ್ರವೇಶಿಸುವ ಪ್ರಯತ್ನ ಮಾಡಿದ್ದಾರೆ.
ಈ ಕಾದಂಬರಿಗೆ ಭೀಮನೇ ನಾಯಕ. ಅವನೇ ಓದುಗರಿಗೆ ಭಾರತದ ಕತೆ ಹೇಳುವ ನಿರೂಪಕ. ಕತೆಹೇಳುವ ಪ್ರಕ್ರಿಯೆಯಲ್ಲಿ , ಲೇಖಕರು ಇತರ ಪಾತ್ರಗಳಿಗೆ ಮಾತನಾಡುವ ಅವಕಾಶವನ್ನು ಕೊಟ್ಟಿಲ್ಲ. ಇಡೀ ಕತೆ ತಿಳಿಯುವುದು ಭೀಮನ First person ನಲ್ಲಿ (ಉತ್ತರಕಾಂಡದಲ್ಲಿ ಉಪಯೋಗಿಸಿರುವ ತಂತ್ರ) . ಈ ತಂತ್ರವು ಕಾದಂಬರಿಯ ಶಕ್ತಿ ಹಾಗು ಮಿತಿ ಎರಡೂ ಆಗಿದೆ.
ದೈತ್ಯ ದೇಹದ , ಅಮಿತ ಪರಾಕ್ರಮಿಯಾದ ಭೀಮ , ದುಡುಕಿನ ಸ್ವಭಾವದವನು , ಹೃದಯ ಸಂವೇದನೆ ಅರಿಯದ ಒರಟ ಎಂಬ ಸಾಧಾರಣವಾಗಿ ಇರುವ ಭಾವನೆ, ಇಲ್ಲಿ ಸುಳ್ಳಾಗುತ್ತದೆ. ಇಲ್ಲಿ , ಕಲ್ಲು ದೇಹದ ಭೀಮನದು ಕೋಮಲ ಮನಸ್ಸು . ಸೌಗಂದಿಕಾ ಪುಷ್ಪವನ್ನು ದ್ರೌಪದಿಗೆ ತಂದುಕೊಟ್ಟಾಗ, ಅವಳು ಅದನ್ನು ಅಲ್ಲೇ ಬಿಸಾಡಿರುವುದನ್ನು ನೊಡಿ ನೊಂದುಕೊಳ್ಳುತ್ತಾನೆ . ತನ್ನಣ್ಣ ಜೂಜಿನಲ್ಲಿ ಸೋಲುತ್ತಿರುವುದು ನೋಡಲಾರದೇ ಎದ್ದು ಹೊರ ನಡೆಯುತ್ತಾನೆ. ವನವಾಸದಲ್ಲಿ ತನ್ನ ಸ್ಥಿತಿಯನ್ನು ನೆನಪಿಸಿಕೊಂಡು "ಗಂಡಸರು ಅಳಬಾರದು" ಎಂದು ತನಗೆ ತಾನೇ ಹೇಳಿಕೊಂಡು ನಕ್ಕು ಸುಮ್ಮನಾಗುತ್ತಾನೆ. ಅವನಿಗೆ ಎಲ್ಲರ ಭಾವನೆಗಳೂ ಅರ್ಥವಾಗುತ್ತವೆ. ಅದಕ್ಕೆ ಸ್ಪಂದಿಸುತ್ತಾನೆ ಕೂಡ. ಆದರೆ ಭೀಮ ಎಂದರೆ ತಿಂದು ,ಅಂಗಸಾಧನೆ ಮಾಡಿ , ಕುಸ್ತಿಯಲ್ಲಿ ಕೊಲ್ಲುವ ಯಂತ್ರವೆಂದು ಎಲ್ಲರೂ ಭಾವಿಸುತ್ತಾರೆ.
ಇನ್ನು ಕೇವಲ ಭೀಮನ ಪಾತ್ರದ ಮೂಲಕ ಇಡೀ ಭಾರತವನ್ನು ನೋಡಿರುವ ಕಾರಣ , ಕಥೆಯ ಒಂದು ಪಾರ್ಶ್ವ ಮಾತ್ರ ನಮ್ಮ ಮುಂದೆ ತೆರೆಸುಕೊಳ್ಳಿತ್ತಾ ಹೋಗುತ್ತದೆ . ಹಾಗು ಈ ಪ್ರಕ್ರಿಯೆಯಲ್ಲಿ ಹಲವು ಪಾತ್ರಗಳು ತೀರ ಪೇಲವಾಗಿ ಚಿತ್ರವಾಗಿವೆ. ಉದಾಹರಣೆಗೆ , ಲೇಖಕರು ಹೇಳುವಂತೆ ಭೀಮ -ಕೃಷ್ಣರ ನಡುವೆ ಭಾವ ನೈಕಟ್ಯವಿರದ ಕಾರಣ ಕೃಷ್ಣ ಹೀಗೆ ಬಂದು ಹಾಗೆ ಹೋಗುತ್ತಾನೆ. ಭೀಮನಿಗೆ ತನ್ನ ಅಣ್ಣ , ಪುರಾಣದ ಕತೆಗಳನ್ನು ಹೇಳುವ, ಜೂಜಿನ ವ್ಯಾಸನಿ ಹಾಗು ಅಶಕ್ತ ಕ್ಷತ್ರಿಯನಂತೆ ಕಾಣುತ್ತಾನೆ. ಯುಧಿಷ್ಠಿರನ ಬಗೆಗೆ ಈ ಭಾವನೆ ಭೀಮನಲ್ಲಿ ಕಾದಂಬರಿಯುದ್ದಕ್ಕೂ ಆಚಲವಾಗಿ ನಿಲ್ಲುತ್ತದೆ.
ಅನುವಾದದಲ್ಲಿ ಭಾಷೆ ಬಿಗಿ ಇರದೆ , ಪ್ರಾರಂಭದ ಮತ್ತು ಅಂತ್ಯದ ಭಾಗಗಳನ್ನು ಬಿಟ್ಟು ಎಲ್ಲೆಡೆಯೂ ತಿಳಿಯಾಗಿದೆ.
ಇನ್ನು , ಲೇಖಕರಿಗೆ ಕೆಲವು ಘಟನೆಗಳಲ್ಲಿನ ಅತೀಂದ್ರಿಯ, ದೈವಿಕ ಅಂಶಗಳನ್ನು ಒಪ್ಪಲು ಇಷ್ಟವಿಲ್ಲ ಹಾಗು ಒಪ್ಪದೇ ಇರಲೂ ಸಾಧ್ಯವಿಲ್ಲ. ಹೀಗಾಗಿ 90 ವರ್ಷದ ಭೀಷ್ಮರ ಕೈಯಲ್ಲಿ ಭರ್ಜರಿ ಯುದ್ಧ ಮಾಡಿಸುತ್ತಾರೆ , ಆದರೆ ದ್ರೌಪದಿ ವಸ್ತ್ರಾಪಹರಣದಲ್ಲಿ ಕೃಷ್ಣನ ಪ್ರಸ್ತಾಪವಿರುವುದಿಲ್ಲ. ಬದಲಾಗಿ ದ್ರೌಪದಿ ಭೇಷ್ಮರ ಹತ್ತಿರ ಓಡಿಹೋಗಿ ಏನೋ ಮಾತನಾಡುತ್ತಾಳೆ. ಅದೇನೆಂದು ಭೀಮನಿಗೆ ತಿಳಿಯುವುದಿಲ್ಲ. ಹೀಗಾಗಿ , ಅದು ಓದುಗರಿಗೂ ತಿಳಿಯದು.
ಇದೆಲ್ಲದರೊಂದಿಗೆ ಕೊನೆಯ ಅಧ್ಯಾಯದಲ್ಲಿ , ಯುಧಿಷ್ಠಿರ , ವಿದುರನಿಂದ ಕುಂತಿಗೆ ಹುಟ್ಟಿದ ಮಗನೆಂದು ಒಂದು shock ನೀಡುತ್ತಾರೆ. ಅದಕ್ಕೆ ಅವರು ವ್ಯಾಸಭಾರತದ ಒಂದು ಶ್ಲೋಕವನ್ನು ಉದ್ಧರಿಸಿ, ಯುಧಿಷ್ಠಿರನ ಈ ರೀತಿಯ ಹುಟ್ಟಿನ ಬಗ್ಗೆ ವ್ಯಾಸರೂ ಸೂಚ್ಯವಾಗಿ ತಿಳಿಸಿದ್ದಾರೆ ಎಂದು ಬರೆದಿದ್ದಾರೆ.
ಇದೇನೇ ಇದ್ದರೂ, ಭೀಮನು ಪ್ರಾಯಶಃ ಯೋಚಿಸಿದ್ದರೆ ಹೀಗೆ ಯೋಚಿಸಿರಬೇಕು. ಅವನ ಮನೋವ್ಯಾಪಾರಗಳು ಇದಕ್ಕಿಂತಾ ಭಿನ್ನವಾಗಿರಲು ಸಾಧ್ಯವಿಲ್ಲ ಎನ್ನುವಷ್ಟು ಅವನ ಮನಸ್ಸನ್ನು ಓದುಗರ ಮುಂದೆ ತೆರೆದಿಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಅಷ್ಟರ ಮಟ್ಟಿಗೆ ಇದು ಉತ್ತಮ ಓದು.
- ಶಶಾಂಕ್ ಪರಾಶರ್

No comments:
Post a Comment